ಮುದ್ದು ಚಾರ್ವೀ'ಗೆThis book was created and published on StoryJumper™
©2015 StoryJumper, Inc. All rights reserved.
Publish your own children's book:
www.storyjumper.com




ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಆತನಿಗೆ ಸ್ವಲ್ಪ ಜಮೀನಿತ್ತು. ಅದರಲ್ಲಿ ಸೌತೆಗಿಡಗಳನ್ನು ಬೆಳೆಸಿದ.
ಸೌತೆಗಿಡಗಳು ಕಾಯಿ ಬಿಡಲಾರಂಭಿಸಿದಾಗ, ಅವುಗಳನ್ನು ಕಾಯಲು ತನ್ನ ಮಗನನ್ನು ಕಳುಹಿಸುತ್ತಿದ್ದ.
ಅಲ್ಲಿ ಆತನಿಗೊಂದು ಪುಟ್ಟ ಗುಡಿಸಲು ನಿರ್ಮಿಸಿಕೊಟ್ಟ.



ಒಂದು ದಿನ, ಹಸಿದ ನರಿಯೊಂದು (ಗುಳ್ಳೆಲಕ್ಕ) ಸೌತೆಕಾಯಿ ತಿನ್ನಲು ಹೊಲಕ್ಕೆ ನುಗ್ಗಿಬಿಟ್ಟಿತು.
ಅದನ್ನು ಹುಡುಗ ದೊಣ್ಣೆಯಿಂದ ಹೆದರಿಸಿ ಓಡಿಸಲು ಮುಂದಾದ.
ಮೊದಲೇ ಹಸಿವಿನಿಂದ ಕೂಡಿದ್ದ ನರಿ ಆತನನ್ನು ಕಚ್ಚಿ ತಿನ್ನುವಂತೆ ಹೆದರಿಸಿಬಿಟ್ಟಿತು.
ಹುಡುಗ ಹೆದರಿ ಗುಡಿಸಿಲಿನ ಮೂಲೆ ಸೇರಿಬಿಟ್ಟ. ನರಿ ಆತನಿಗೆ,
“ನಾನು ಹೇಳಿದಂತೆ ಕೇಳಿದರೆ ನಿನಗೇನು ಮಾಡುವುದಿಲ್ಲ.
ನಾನು ಬರುವವರೆಗೂ ಸುಮ್ಮನೆ ಕುಳಿತಲ್ಲೇ ಕುಳಿತಿರು”
ಎಂದು ಹೇಳಿತು. ಹುಡುಗ ಒಪ್ಪಿದ.



ಆಗ ನರಿ ನಿರ್ಭಯವಾಗಿ ಎಳೆಯ ಸೌತೆಕಾಯಿಗಳನ್ನು ಹೊಟ್ಟೆ ತುಂಬ ತಿನ್ನಲಾರಂಬಿಸಿತು.
ತಿಂದಾದ ಮೇಲೆ, ಬಲಿತ ಸೌತೆಕಾಯಿಗಳಿಗೆ ತನ್ನ ಅಂಡು ಉಜ್ಜುತ್ತಿತ್ತು!
ನಂತರ ಆ ಹುಡುಗನ ಬಳಿಬಂದು ಆತನ ಮುಖಕ್ಕೆ ಅಂಡು ತಿರುಗಿಸ
ಒಂದು ದೊಡ್ಡ ಹೂಸು ಕೊಟ್ಟು ಓಡಿ ಹೋಯಿತು.



ಹುಡುಗ ಸಧ್ಯ ಬದುಕಿದೆ ಎಂದು ಮನೆಗೆ ನಡೆದ. ಮನೆಯಲ್ಲಿ ಏನೂ ಹೇಳಲಿಲ್ಲ.
ಮಾರನೆಯ ದಿನವೂ ನರಿ ಬಂತು. ಮೊದಲ ದಿನ ಮಾಡಿದಂತೆಯೆ, ಎಳೆಯ ಸೌತೆಕಾಯಿಗಳನ್ನು
ತಿಂದು, ಬಲಿತ ಕಾಯಿಗೆ ಅಂಡು ಉಜ್ಜಿ, ಹುಡುಗನ ಮುಖಕ್ಕೆ ಹೂಸು ಕೊಟ್ಟು ಹೋಯಿತು.
ಇದು ಕೆಲವು ದಿನಗಳ ಕಾಲ ಮುಂದುವರೆದಾಗ,
ಹುಡುಗ ಹೂಸು ಕುಡಿದು ಕುಡಿದು ಖಾಯಿಲೆ ಬಿದ್ದುಬಿಟ್ಟ.
ಹುಡುಗನ ಅಪ್ಪ ಏನು? ಏಕೆ? ಎಂದು ಕೇಳಿದ. ಹುಡುಗ ಪೂರ್ಣ ವಿಷಯ ತಿಳಿಸಿದ.
ರೈತನಿಗೆ ಕೋಪ ಬಂದು ನರಿಗೆ ಸರಿಯಾದ ಬುದ್ಧಿ ಕಲಿಸಲು ನಿರ್ಧರಿಸಿದ.



ಒಂದಷ್ಟು ಸಣ್ಣ ಸಣ್ಣ ಚಾಕುಗಳನ್ನು ಮಾಡಿಸಿ,
ಗಿಡದಲ್ಲಿದ್ದ ಬಲಿತ ಸೌತೆಕಾಯಿಗಳಿಗೆ ಚುಚ್ಚಿ,
ಸ್ವಲ್ಪಭಾಗ ಹೊರಗಿರುವಂತೆ ಮಾಡಿದ.
ನರಿ ಎಂದಿನಂತೆ ಬಂದು ಎಳೆ ಸೌತೆಕಾಯಿ ತಿಂದು,
ಬಲಿತ ಸೌತೆಕಾಯಿಗೆ ಅಂಡು ಉಜ್ಜತೊಡಗಿತು.
ಹರಿತವಾಗಿದ್ದ ಚಾಕು ಅದರ ಅಂಡನ್ನು ಸೀಳಿದ್ದರಿಂದ ರಕ್ತ ಹರಿಯಿತು.
ನರಿ, ‘ಸೌತೆಕಾಯಿಗೆ ಹಲ್ಲು ಬಂದುಬಿಟ್ಟಿದೆ.
ಇನ್ನು ಮೇಲೆ ಈ ಸೌತೆಕಾಯಿಯ ಸಹವಾಸವೇ ಸಾಕು’
ಎಂದು ಓಡಿ ಹೋಯಿತು.



ಸ್ವಲ್ಪ ದೂರ ಹೋದ ನರಿ ಅಲ್ಲಿದ್ದ ಒಂದು ಕಲ್ಲುಗುಂಡಿನ ಮೇಲೆ ಕುಳಿತಿತು.
ಮೊದಲೇ ಬಿಸಿಲಿಗೆ ಚೆನ್ನಾಗಿ ಕಾದಿದ್ದ ಕಲ್ಲುಗುಂಡಿಗೆ
ರಕ್ತಸಿಕ್ತವಾಗಿದ್ದ ನರಿಯ ಅಂಡು ಅಂಟಿಕೊಂಡುಬಿಟ್ಟಿತು.
ನರಿ ಮೇಲೇಳಲು ಹೋದರೆ ಕಲ್ಲುಗಂಡೂ ಜೊತೆಯಲ್ಲೇ ಬರುತ್ತಿತ್ತು.
ಏನು ಮಾಡಿದರೂ ಗುಂಡಿನಿಂದ ಬಿಡಿಸಿಕೊಳ್ಳಲಾಗಲಿಲ್ಲ.
ಕಷ್ಟ ಬಂದಾಗ ವೆಂಕಟರಮಣ ಎನ್ನುವಂತೆ ನರಿಗೆ ದೇವರು ನೆನಪಾದ.
ಮಳೆ ಮಲ್ಲಪ್ಪ ದೇವರಿಗೆ ಹರಕೆ ಹೊತ್ತು ಮಳೆ ಸುರಿಸುವಂತೆ ಬೇಡಿಕೊಂಡಿತು.
ಮಳೆ ಸುರಿಸಿದರೆ ಒಂದು ಪರ ಮಾಡುವುದಾಗಿಯೂ ಹರಸಿಕೊಂಡಿತು.
ಸಂಜೆಯ ವೇಳೆಗೆ ಮಳೆ ಬಂತು.
ನೀರಿನಿಂದ ಒದ್ದೆಯಾದ ಮೇಲೆ ಬಂಡೆಯಿಂದ ಅಂಡು ಸುಲಭವಾಗಿ ಬಿಟ್ಟುಕೊಂಡಿತು.



ನರಿ ಕುಳಿತು ಯೋಚಿಸಿತು. ‘ಸೌತೆಕಾಯಿಗೆ ಹಲ್ಲು ಬರುವುದೆಂದರೇನು?
ನನ್ನಂಥ ಠಕ್ಕನರಿ ಹರಸಿಕೊಂಡಾಕ್ಷಣ ಮಳೆ ಮಲ್ಲಪ್ಪ ಮಳೆ ಸುರಿಸುವುದೆಂದರೇನು?
ಇದೆಲ್ಲಾ ಸುಳ್ಳು. ನಾನು ಹರಸಿಕೊಳ್ಳದಿದ್ದರೂ ಸಂಜೆ ಮಳೆ ಬಂದೇ ಬರುತ್ತಿತ್ತು.
ನಾನು ಯಾವ ಹರಕೆಯನ್ನೂ ತೀರಿಸಬೇಕಾಗಿಲ್ಲ.
ನಾಳೆ ಮತ್ತೆ ಸೌತೆಕಾಯಿ ತಿನ್ನಬಹುದು; ಅಂಡು ಉಜ್ಜದಿದ್ದರಾಯಿತು’
ಎಂದು ಎದ್ದು ಕತ್ತಲಲ್ಲಿ ಓಡತೊಡಗಿತು. ಹಾಗೆ ಓಡುವಾಗ, ಮಳೆಗತ್ತಲಲ್ಲಿ ಕಾಣದೆ,
ನೀರುತುಂಬಿದ್ದ ಹೊಂಡದಲ್ಲಿ ಬಿದ್ದುಬಿಟ್ಟಿತು.
‘ಕಾಪಾಡಿ ಕಾಪಾಡಿ’ ಎಂದರೂ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಕೂಗಿ ಕೂಗಿ ನಿಶಕ್ತವಾಗಿ,
ಕೊನೆಗೆ ನರಿ ಸತ್ತೇಹೋಯಿತು.
(ಅಜ್ಜನಿಂದ ಕೇಳಿದ್ದ ಕಥೆಯ ಬರಹ ರೂಪ)


